‘ಡ್ಯೂಡ್‍’ ಚಿತ್ರದ ಹಾಡು ಬಿಡುಗಡೆ: ತೇಜ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍

Dude Movie: ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ ಫುಟ್ಬಾಲ್‍ ಹಿನ್ನೆಲೆಯ ಚಿತ್ರ ಮಾಡುತ್ತಿದ್ದಾರೆ.

Written by - YASHODHA POOJARI | Edited by - Zee Kannada News Desk | Last Updated : Feb 22, 2025, 12:53 PM IST
  • ತೇಜ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍
  • ಮಹಿಳೆಯರ ಶಕ್ತಿ ತೋರಿಸುವ ಚಿತ್ರಕ್ಕೆ ಪುನೀತ್‍ ರಾಜ್‍ಕುಮಾರ್ ಪ್ರೇರಣೆ
  • ಸತತ ಪರಿಶ್ಮದಿಂದ ಕನಸು ನನಸಾಗುತ್ತದೆ ಎಂದು ಸಾರುವ ಚಿತ್ರ
‘ಡ್ಯೂಡ್‍’ ಚಿತ್ರದ ಹಾಡು ಬಿಡುಗಡೆ: ತೇಜ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍ title=

Dude Movie: ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ ಫುಟ್ಬಾಲ್‍ ಹಿನ್ನೆಲೆಯ ಚಿತ್ರ ಮಾಡುತ್ತಿದ್ದಾರೆ. 

ಈ ಚಿತ್ರದಲ್ಲಿ ಅವರು 12 ಹೊಸ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಅರ್ಧ ಚಿತ್ರೀಕರಣ ಮುಗಿಸಿರುವ ತೇಜ್‍, ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಮಾಡಿದ್ದಾರೆ. MMB Legacyಯಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿ ಚಿತ್ರದ ಹಾಡನ್ನು ಬಿಡುಗಡೆ ಮಾಡಿದವರು ತೇಜ್‍ ಅವರ ಸಂಬಂಧಿ ಮೇಘನಾ ರಾಜ್‍. ಈ ಸಂದರ್ಭದಲ್ಲಿ ನಿರ್ದೇಶಕರಾದ ಹರಿ ಸಂತು ಮತ್ತು ಪ್ರವೀಣ್‍ ನಾಯಕ್‍ ಸಹ ಹಾಜರಿದ್ದರು.

ಹಾಡು ಬಿಡುಗಡೆ ಮಾಡಿ ಮಾತನಾಡಿದ ಮೇಘನಾ ರಾಜ್, ‘ತೇಜ್‍ ಅವರ ಎಲ್ಲಾ ಪ್ರಯತ್ನಗಳಿಗೂ ನಮ್ಮ ಕುಟುಂಬದ ಪ್ರೋತ್ಸಾಹ ಇದ್ದೇ ಇರುತ್ತದೆ. ಈ ಚಿತ್ರದ ಹಾಡು ಬಿಡುಗಡೆ ಮಾಡಿಕೊಡಬೇಕು ಎಂದಾಗ ಖಂಡಿತಾ ಬರುತ್ತೇನೆ ಎಂದೆ. ಅವರು ನಮ್ಮ ಮನೆಗೆ ಬಂದು ಕ್ರೀಡಾ ಹಿನ್ನೆಲೆಯ ಚಿತ್ರ ಮಾಡುತ್ತಿದ್ದೇನೆ ಎಂದಾಗ, ‘ಚಕ್‍ದೇ ಇಂಡಿಯಾ’ ಮಾದರಿಯ ಚಿತ್ರವಾ ಎಂದು ಕೇಳಿದೆವು. ತಮಿಳಿನ ‘ಬಿಜಿಲ್‍’ ಮಾದರಿಯ ಚಿತ್ರ ಇರಬಹುದು ಅಂದುಕೊಂಡೆವು. ಈ ಚಿತ್ರದ ಹಾಡುಗಳನ್ನು ನೋಡುತ್ತಿದ್ದರೆ, ಬೇರೆ ಕ್ರೀಡೆ ಹಿನ್ನೆಲೆಯ ಚಿತ್ರಗಳು ನೆನಪಿಗೆ ಬರಬಹುದು. ಆದರೆ, ತೇಜ್‍ ಅವರ ತಲೆಯಲ್ಲಿ ಏನು ಓಡುತ್ತಿರುತ್ತದೆ, ಅವರು ಸಿನಿಮಾದಲ್ಲಿ ಏನು ತೋರಿಸುತ್ತಾರೆ ಎಂಬ ಕುತೂಹಲ ನಮಗೂ ಇದೆ. ಅವರು ಪ್ರತಿ ಚಿತ್ರಕ್ಕೂ ಶ್ರಮ ಹಾಕುತ್ತಿರುತ್ತಾರೆ. ಏನೋ ಮಾಡುತ್ತೀನಿ ಎಂಬ ವಿಶ್ವಾಸ ಅವರಿಗಿದೆ. ಅವರಿಗೆ ಒಳ್ಳೆಯದಾಗಲೀ, ಚಿತ್ರ ಯಶಸ್ವಿಯಾಗಲಿ’ ಎಂದರು.

ನಾಯಕ-ನಿರ್ದೇಶಕ ತೇಜ್‍ ಮಾತನಾಡಿ, ‘ನಾನು ನನ್ನ ವೃತ್ತಿಜೀವನದಲ್ಲಿ ಎಂಟು ಸಿನಿಮಾ ಮಾಡಿದ್ದೇನೆ. ಇದು ವೈಯಕ್ತಿಕವಾಗಿ ನನಗೆ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ, ಮಹಿಳೆಯರ ಶಕ್ತಿಯನ್ನು ತೋರಿಸುವ ಚಿತ್ರ. ಈ ಚಿತ್ರ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ನನ್ನ ಕನಸಿಗೆ ಚಿತ್ರತಂಡದ ಪ್ರತಿಯೊಬ್ಬರೂ ನೆರವಾಗಿದ್ದಾರೆ. ನಾನು ರಾಘವೇಂದ್ರ ರಾಜಕುಮಾರ್‍ ಅವರ ಜೊತೆಗೆ ‘ರಾಮಾಚಾರಿ 2.0’ ಚಿತ್ರದಲ್ಲಿ ಮಾತನಾಡುವ ಸಂದರ್ಭದಲ್ಲಿ, ಅವರು ಅಪ್ಪುಗೆ ಫುಟ್ಬಾಲ್‍ ಇಷ್ಟ ಎಂದು ಹೇಳಿದ್ದರು. ಜೊತೆಗೆ ಪುನೀತ್‍, ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂದು ಪ್ರತಿಪಾದಿಸಿಕೊಂಡು ಬಂದವರು. ಈ ಎರಡು ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಈ ಚಿತ್ರವನ್ನು ಪುನೀತ್‍ ಅವರಿಗೆ ಅರ್ಪಿಸುತ್ತಿದ್ದೇವೆ. ಈಗಾಗಲೇ ಶೇ. 50ರಷ್ಟು ಮುಕ್ತಾಯವಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

ಜೀವನದಲ್ಲಿ ಗೆಲ್ಲಬೇಕೆಂದರೆ, ಪ್ರತಿಭೆ ಮತ್ತು ಅದೃಷ್ಟ ಇಲ್ಲದಿದ್ದರೂ ಪರವಾಗಿಲ್ಲ, ಸತತ ಪರಿಶ್ರಮದಿಂದ ಗೆಲ್ಲಬಹುದು ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ ಎಂದ ತೇಜ್‍, ‘ಇಲ್ಲಿ ನಾನು ಕೋಚ್‍ ಆಗಿರುವುದಿಲ್ಲ. ರಂಗಾಯಣ ರಘು ಕೋಚ್ ಆಗಿರುತ್ತಾರೆ. ಅವರು ಮಾಡುವ ತರಲೆಯಿಂದ ನಾನು ಕೋಚ್‍ ಆಗಿ ಬರಬೇಕಾಗುತ್ತದೆ. ಇಲ್ಲಿ ರಾಘಣ್ಣ, ಅವರ ನಿಜಜೀವನದ ಪಾತ್ರವನ್ನೇ ಮಾಡುತ್ತಿದ್ದಾರೆ. ಅಪ್ಪು ಹೆಸರಿನಲ್ಲಿ ಒಂದು ಟೂರ್ನಿ ಆಯೋಜಿಸಿರುತ್ತಾರೆ. ಕರ್ನಾಟಕದ ಬೇರೆಬೇರೆ ಪ್ರದೇಶದ ಫುಟ್ಬಾಲ್ ‍ಗೊತ್ತಿಲ್ಲದ ಹೆಣ‍್ಮಕ್ಕಳು ಒಂದು ತಂಡವಾಗಿ ಹೇಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ‍್ಳುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದರು.

‘ಡ್ಯೂಡ್‍’ ಚಿತ್ರವು ಪಾನಾರೋಮಿಕ್‍ ಸ್ಟುಡಿಯೋ ಬ್ಯಾನರ್‍ ಅಡಿ ನಿರ್ಮಾಣವಾಗಿದ್ದು, ಅಭಿನಯ ಮತ್ತು ನಿರ್ದೇಶನದ ಜೊತೆಗೆ ತೇಜ್‍ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಚಿತ್ರದಲ್ಲಿ ತೇಜ್‍ ಜೊತೆಗೆ ಸಾನ್ಯಾ ಕಾವೇರಮ್ಮ, ರಾಘವೇಂದ್ರ ರಾಜ್‍ಕುಮಾರ್‍, ರಂಗಾಯಣ ರಘು, ಸುಂದರ್‍ ರಾಜ್‍, ವಿಜಯ್‍ ಚೆಂಡೂರು, ಸ್ಪರ್ಶ ರೇಖಾ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಎಮಿಲ್‍ ಮೊಹಮ್ಮದ್‍ ಸಂಗೀತ ಸಂಯೋಜನೆ ಇದ್ದು, ಪ್ರೇಮ್ ಛಾಯಾಗ್ರಹಣವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News